ಫ್ರೀಮನ್, ಎಡ್ವರ್ಡ್ ಆಗಸ್ಟಸ್ 1823-92. ಇಂಗ್ಲಿಷ್ ಇತಿಹಾಸಕಾರ. 11ನೆಯ ಮತ್ತು 12ನೆಯ ಶತಮಾನಗಳ ಇಂಗ್ಲೆಂಡಿನ ಇತಿಹಾಸ ಕುರಿತು ಅಧಿಕಾರವಾಣಿಯಿಂದ ನುಡಿಯಬಲ್ಲವನಾಗಿದ್ದವ. 1884ರಿಂದ ತನ್ನ ಜೀವಿತದ ಕೊನೆಯವರೆಗೂ ಆಕ್ಸ್‍ಫರ್ಡಿನಲ್ಲಿ ಆಧುನಿಕ ಇತಿಹಾಸದ ರಾಜಪೋಷಿತ ಪ್ರಾಧ್ಯಾಪಕ (ರೀಜಿಯಸ್ ಪ್ರೊಫೆಸರ್) ಆಗಿದ್ದ. ಸ್ಟಾಫರ್ಡ್‍ಪೈರ್‍ನ ಹಾರ್ಬರ್ನ್‍ನಲ್ಲಿ 1823ರ ಆಗಸ್ಟ್ 2ರಂದು ಜನಿಸಿದ. ಆರಂಭದ ವಿದ್ಯಾಭ್ಯಾಸವನ್ನು ಮನೆ ಪಾಠದಿಂದ ಪಡೆದ. 1841ರಲ್ಲಿ ವಿದ್ಯಾರ್ಥಿವೇತನ ಪಡೆದು ಆಕ್ಸ್‍ಫರ್ಟಿನ ಟ್ರಿನಿಟಿ ಕಾಲೇಜನ್ನು ಪ್ರವೇಶಿಸಿದ ಈತ ನಾಲ್ಕು ವರ್ಷಗಳ ಅನಂತರ ಅಲ್ಲಿಯ ಫೆಲೊ ಆದ. ಅಧ್ಯಯನಕ್ಕೆ ಈತನ ಬಾಳು ಮುಡಿಪಾಯಿತು. ಇವನು ಪ್ರಕಟಿಸಿದ ಪುಸ್ತಕಗಳ, ಹಸ್ತಪತ್ರಗಳ, ಲೇಖನಗಳ ಸಂಖ್ಯೆ ಆಗಾಧ. ವಾದಗ್ರಸ್ತವಿಚಾರಗಳಲ್ಲಿ ತೊಡಗುವುದು, ವಾದವನ್ನು ಸೃಷ್ಟಿಸುವುದು ಇವನ ಸ್ವಭಾವವಾಗಿತ್ತು. ಗ್ಲ್ಯಾಡ್‍ಸ್ಟನ್ನನಿಗೆ ಬೆಂಬಲ ನೀಡಿ ಇವನು ಪ್ರಚಾರ ನಡೆಸಿದ. ಸ್ವತಃ ಪಾರ್ಲಿಮೆಂಟಿಗೆ ಸ್ಪರ್ಧಿಸಿ ಸೋತ.

ಇತಿಹಾಸದ ಏಕತೆಯನ್ನು ಪ್ರತಿಪಾದಿಸಿದ್ದು ಫ್ರೀಮನ್ನನ ವೈಶಿಷ್ಟ್ಯ. ಇತಿಹಾಸ ರಚನೆಗೆ ಮೂಲ ಆಕರಗಳನ್ನು ಅವಲಂಬಿಸಬೇಕೆಂಬುದು ಇವನ ವಾದವಾಗಿತ್ತು. ಆದರೆ ಇವನು ಆಕರಗಳನ್ನು ಬಳಸಿಕೊಳ್ಳುವುದರಲ್ಲಿ ಹೆಚ್ಚಿನ ವಿಮರ್ಶಾತ್ಮಕ ನಿಲುವು ತಳೆಯಲಿಲ್ಲ. ಅವನ್ನು ನಿರ್ದಿಷ್ಟವೂ ನಿರ್ದುಷ್ಟವೂ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಲಿಲ್ಲ. ನಾರ್ಮನ ವಿಜಯದ ಇತಿಹಾಸ ಕುರಿತ 6 ಸಂಪುಟಗಳ ಗ್ರಂಥ ಇವನ ಮಹಾಕೃತಿ. ಸ್ಥೂಲವಾಗಿ ಇದನ್ನು ಇಂದಿನ ವಿದ್ವಾಂಸರು ಒಪ್ಪುತ್ತಾರಾದರೂ ವಿವರಗಳಲ್ಲಿ ಈತ ಸೋತಿದ್ದಾನೆ, ಅನ್ಯರ ಕೃತಿಗಳಲ್ಲಿ ಈತ ಟೀಕಿಸಿದ ದೋಷಗಳೆ ಈ ಕೃತಿಯಲ್ಲೂ ಇರುವುದು ವ್ಯಕ್ತವಾಗಿದೆ. 1892ರ ಮಾರ್ಚ್ 16ರಂದು ಈತ ತೀರಿಕೊಂಡ.
(ವಿ.ಎಂ.ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ